ಬಾಳೆಹೊನ್ನೂರು: ‘ನಾವು ಈಗ ಪೊಲೀಸರನ್ನೂ ನಂಬಲ್ಲ, ಅಧಿಕಾರಿಗಳನ್ನೂ ನಂಬಲ್ಲ, ನಕ್ಸಲರನ್ನೂ ನಂಬಲ್ಲ. ಎಲ್ಲ ನಮ್ಮ ಹಣೆಯಲ್ಲಿ ಬರೆದಿದ್ದಂತೆ ಆಗುತ್ತದೆ. ಮುಂದಿನದ್ದು ದೈವೇಚ್ಛೆ…’
ಕಾಡಿನ ಒಡಲಲ್ಲೇ ಬಹುಕಾಲದಿಂದ, ತಮ್ಮ ಮಟ್ಟಿಗೆ ಸಂತೃಪ್ತಿಯ ಜೀವನ ನಡೆಸಿದ ‘ಕೆಳಜಾತಿ’ಯ (ವರ್ಗ) ದಲಿತರು ಮತ್ತು ‘ಮೇಲ್ಜಾತಿ’ಯ (ವರ್ಗ) ಭಟ್ಟರು ಇದೀಗ ತಮ್ಮ ಮುಂದೆ ಪ್ರತ್ಯಕ್ಷವಾಗಿರುವ ಸಮಸ್ಯೆಗಳನ್ನು ಹೊರ ಜಗತ್ತಿಗೂ ಸಾರಿ ಹೇಳಬೇಕೆಂದು ತಹತಹಿಸುತ್ತಿದ್ದರು.
ಇತ್ತ ಪೊಲೀಸರ- ಅತ್ತ ನಕ್ಸಲರ ಭಯದಿಂದ ತತ್ತರಿಸಿದ್ದ ಅವರು ಬಾಳೆಹೊನ್ನೂರು ಸಮೀಪದ ಅಜ್ಞಾತ ಸ್ಥಳವೊಂದರಲ್ಲಿ ‘ಪ್ರಜಾವಾಣಿ’ ಎದುರು ಮುಕ್ತವಾಗಿ ಮನಸ್ಸು ತೋಡಿಕೊಂಡರು…
ಶಾಂತಿ ಬೇಕು:
ಮಲೆನಾಡಿನಲ್ಲಿ ಅನುಮಾನವೆಂಬ ಭೂತದ ರುದ್ರ ನೃತ್ಯ ನಡೆದಿದೆ. ಇಲ್ಲಿರುವುದು ಎರಡೇ ಬಣ್ಣ. ಒಂದು ಕಪ್ಪು ಇನ್ನೊಂದು ಬಿಳುಪು (ಅದನ್ನು ನೀವು ಪೊಲೀಸ್ ಮತ್ತು ನಕ್ಸಲ್ ಎಂದು ಓದಿಕೊಳ್ಳಬಹುದು). ನಡುವಣ ಬಣ್ಣಗಳೇ ಇಲ್ಲಿ ಅದೃಶ್ಯವಾಗಿವೆ. ನಮಗೆ ಇಬ್ಬರ ಸಹವಾಸವೂ ಬೇಡ. ಪ್ಲೀಸ್ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ. ನೂರಾರು ವರ್ಷಗಳಿಂದ ಒಂಟಿ ಮನೆಯ್ಲಲಿಯೇ ಬದುಕುತ್ತಿದ್ದ ನಮಗೆ ಇದೀಗ ರಾತ್ರಿ ವೇಳೆ ಯಾರಾದರೂ ಬಾಗಿಲು ತಟ್ಟಿದರೆ ಮೈ ನಡುಗುತ್ತದೆ. ಬೂಟುಗಾಲಿನ ಸದ್ದು, ಬಂದೂಕಿನ ಮೊರೆತ ನಮ್ಮ ದೈರ್ಯವನ್ನು ನುಂಗಿದೆ.
ಅಷ್ಟೇಕೆ ಸ್ವಾಮಿ ನಮ್ಮ ಮನೆಗಳಲ್ಲಿ ಮುಂದಿನ ವಾರಕ್ಕೆಂದು ಒಂದಿಷ್ಟು ಹೆಚ್ಚಿಗೆ ಅಕ್ಕಿಯನ್ನೂ ಸಂಗ್ರಹಿಸುವಂತಿಲ್ಲ. ನಕ್ಸಲರು ‘ನಿಮಗೇಕೆ ಅಷ್ಟೊಂದು ಅಕ್ಕಿ. ನಾವು ನಿಮಗಾಗಿ ಹೋರಾಡುವವರು. ನಮಗೀಗ ಅವಶ್ಯಕತೆಯಿದೆ. ಕೊಟ್ಟುಬಿಡಿ’ ಎಂದು ಕೇಳುತ್ತಾರೆ, ಕೊಡದ್ದಿದರೆ ಕಿತ್ತುಕೊಳ್ಳುತ್ತಾರೆ. ನಾಳೆ ಪೊಲೀಸರು ಬಂದರೆ ‘ನೀವು ನಕ್ಸಲರಿಗೆ ಅಕ್ಕಿ ಕೊಟ್ಟಿದ್ದೀರಿ. ನಕ್ಸಲ್ ಬೆಂಬಲಿಗರು’ ಎಂದು ನಮ್ಮನ್ನೇ ಜೀಪಿಗೆ ಹತ್ತಿಸಿಕೊಳ್ಳುತ್ತಾರೆ.
ನಕ್ಸಲ್ ಉಪಟಳ ಶುರುವಾಗುವುದಕ್ಕೆ ಮೊದಲು ಕಿಗ್ಗಾ ಆಸುಪಾಸಿನ ಗ್ರಾಮಗಳಿಗೆ ನೀವು ಬರಬೇಕಿತ್ತು. ನಿಮ್ಮನ್ನು ಇಡೀ ಊರು ತನ್ನ ಅತಿಥಿ ಎಂದು ಪರಿಗಣಿಸುತ್ತಿತ್ತು. ನಿಮ್ಮ ಲಗೇಜನ್ನು ಗ್ರಾಮಸ್ಥರೇ ಹೊತ್ತು ನೀವು ತಲುಪಬೇಕಾದ ಮನೆ ತಲುಪಿಸುತ್ತಿದ್ದರು. ಆದರೆ ಇಂದು ನಮ್ಮೂರಿಗೆ ಬನ್ನಿ. ನಿಮ್ಮನ್ನು ನೋಡಿದ ಜನ ನಕ್ಸಲ್ ರಿಕ್ರೂಟರ್ ಅಥವಾ ಪೊಲೀಸ್ ಮಾಹಿತಿದಾರ ಎಂದು ಬಾಗಿಲು ಹಾಕಿಕೊಳ್ಳುತ್ತಾರೆ. ಅಲ್ಲಿ ಉಳಿದಿರುವುದು ಕಪ್ಪು ಮತ್ತು ಬಿಳುಪು ಮಾತ್ರ.
ಪೊಲೀಸರ ವೈಖರಿ:
ನಕ್ಸಲರನ್ನು ಬಿಡಿ ನಾವು ಪ್ರಶ್ನಿಸುವಂತಿಲ್ಲ. ಆದರೆ ನಮ್ಮ ತೆರಿಗೆಯಿಂದಲೇ ಹೊಟ್ಟೆಹೊರೆಯುವ ಪೊಲೀಸರು ಸೂಕ್ಷ್ಮವಾಗಿ ವರ್ತಿಸ್ದಿದರೆ ನಿಜಕ್ಕೂ ನಮಗೆ ಇಂಥ ಪಾಡು ಬರುತ್ತಿರಲಿಲ್ಲ. ಶೃಂಗೇರಿ ಠಾಣೆಗೆ ಬರುವ ಬಹುತೇಕ ಪೊಲೀಸರು ಪನಿಶ್‌ಮೆಂಟ್ ಟ್ರಾನ್ಸ್‌ಫರ್ ಮೇಲೆ ಬಂದವರು. ಇಲ್ಲಿಂದ ಹೊರಗೆ ಹೋಗುವುದನ್ನೇ ಪ್ರಮೋಶನ್ ಎಂದುಕೊಂಡವರಿಂದ ಎಂಥ ರಕ್ಷಣೆ ಸಿಗಲು ಸಾಧ್ಯ?
ನಕ್ಸಲರು ನಮ್ಮನ್ನು ನಂಬುವಷ್ಟೂ ಈ ಪೊಲೀಸರು ನಮ್ಮನ್ನು ನಂಬುವುದಿಲ್ಲ. ನಾವು ಕೊಡುವ ಮಾಹಿತಿಗೆ ತಕ್ಷಣ ಸ್ಪಂದಿಸುವುದಿಲ್ಲ. ನಾವೇ ಮಾಹಿತಿ ಕೊಟ್ಟಿದ್ದು ಎಂದು ತಿಳಿದರೆ ಊರಿನವರಿಗೆಲ್ಲಾ ಕೇಳಿಸುವಂತೆ ‘ಓ ನೀವಾ… ಅಂದು ನೀವು ಕೊಟ್ಟ ಮಾಹಿತಿ ಉಪಯೋಗಕ್ಕೆ ಬರಲಿಲ್ಲ ರಾಯರೇ’ ಎಂದು ಬಿಡುತ್ತಾರೆ. ಊರಿನವರ ಕಣ್ಣಿಗೆ ನಾವು ಪೊಲೀಸ್ ಮಾಹಿತಿದಾರರಾಗುತ್ತೇವೆ. ಈ ಮಾಹಿತಿ ಸರಾಗವಾಗಿ ನಕ್ಸಲರಿಗೆ ತಲುಪಿ ನಾವು ಊರು ಬಿಡುವಂತೆ ಅಥವಾ ಈ ದೇಹ ಬಿಡುವಂತೆ ಆಗುತ್ತದೆ.
ಮಾಹಿತಿಗೆ ಸಿಕ್ಕ ಫಲ:
ನಮಗೆ ನಕ್ಸಲರು ಶತ್ರುಗಳಲ್ಲ- ಪೊಲೀಸರು ಮಿತ್ರರಲ್ಲ. ಆದರೂ ನಾವು ಪೊಲೀಸರನ್ನೇ ನಂಬುತ್ತೇವೆ ತಾನೆ. ಆದರೆ ಅದಕ್ಕೆ ಸಿಕ್ಕ ಫಲವಾದರೂ ಏನು? ಪೊಲೀಸರಿಗೆ ಮಾಹಿತಿ ಕೊಟ್ಟ ಹೆಮ್ಮಿಗೆ ಚಂದ್ರಕಾಂತನಿಗೆ ಆದ ಗತಿಯನ್ನು ನೆನೆಪಿಸಿಕೊಂಡರೇ ಮೈ ಜುಂ ಎನಿಸುತ್ತದೆ.
ಸ್ಥಳೀಯ ಪೊಲೀಸರ ಮೇಲೆ ನಂಬಿಕೆಯಿಲ್ಲ ಎಂದೇ ನಾವು ಚಿಕ್ಕಮಗಳೂರು, ಮಂಗಳೂರು ಅಥವಾ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡುತ್ತೇವೆ. ‘ನಾಳೆ ಫೋನ್ ಮಾಡಿ, ಶೃಂಗೇರಿ ಸ್ಟೇಷನ್‌ಗೇ ಫೋನ್ ಮಾಡಿ’ ಎಂದರೆ ನಾವು ಏನು ಮಾಡಬೇಕು?
ಅಸಮರ್ಥ ಶಾಸಕ:
ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ನಕ್ಸಲರಿಗೆ ಸಂಪೂರ್ಣ ಶರಣಾಗಿದ್ದಾರೆ. ನಮ್ಮ ಇಡೀ ಊರು ಅವರನ್ನು ಬೆಂಬಲಿಸುತ್ತದೆ. ಆದರೆ ನಮ್ಮ ಮನೆಗೆ ನಕ್ಸಲರು ಬಂದು ಧಮಕಿ ಹಾಕಿದ್ದಾರೆ ಎಂದು ತಿಳಿದ ನಂತರವೂ ಅವರು ನಮ್ಮೂರಿಗೆ ಬಂದು ನಮಗೆ ದೈರ್ಯ ಹೇಳಲಿಲ್ಲ. ಆರ್‌ಎಸ್‌ಎಸ್ ಶಾಖೆಗೆ ಹೋದ ನಮ್ಮೂರಿನ ಅನೇಕ ಮಂದಿ ಯಾವುದೇ ‘ಕೂಲಿ’ ಪಡೆಯದೇ ಅವರ ಪರವಾಗಿ ಮನೆಮನೆ ತಿರುಗಿ ಓಟು ಕೇಳ್ದಿದೇವೆ. ಆದರೆ ‘ಕೂಲಿ’ ಬೆಂಬಲಿಗರಿಗೆ ಸಿಗುವ ಕಿಮ್ಮತ್ತು ನಮಗೆ ಎಂದಿಗೂ ಸಿಗಲಿಲ್ಲ.
ಶೃಂಗೇರಿ ತಹಸೀಲ್ದಾರರು ಪ್ರತಿ ತಿಂಗಳು ನಡೆಸುವ ಜನಸಂಪರ್ಕ ಸಭೆಗೆ ಹಿರಿಯ ಅಧಿಕಾರಿಗಳು ಬರುತ್ತಾರೆ. ಆದರೆ ಶಾಸಕರು ನಾಪತ್ತೆ. ಇಲ್ಲಿನ ಜನರನ್ನು ಪ್ರತಿನಿಧಿಸುವ, ಸ್ಟೆನ್‌ಗನ್ ಹಿಡಿದ ಗನ್‌ಮ್ಯಾನ್ ರಕ್ಷಣೆಯಿರುವ ಶಾಸಕರಿಗೇ ಇಷ್ಟು ಭಯವಿದ್ದರೆ ಉಳಿದವರ ಪಾಡು ಏನು? ಸಂಘ ಪರಿವಾರದ ಹಿನ್ನೆಲೆಯಿರುವ ನಮ್ಮಂಥವರ ಮತವನ್ನು ತಮ್ಮ ಮೀಸಲು ಸ್ವತ್ತು ಎಂದುಕೊಂಡಿರುವ ಇವರು ನಮ್ಮನ್ನು ನಿರ್ಲಕ್ಷಿಸುತ್ತ್ದಿದಾರೆ ಅಥವಾ ನಕ್ಸಲರಿಗೆ ಹೆದರಿದ್ದಾರೆ.
ಪೊಲೀಸರು ಕೆಲಸ ಮಾಡುವುದು ಹೀಗೆ…
ಇದೇ ಡಿ.೨೧ರಂದು ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ತನ್ನ ಹೆರೂರುಮಕ್ಕಿಯ ತನ್ನ ಮನೆಗೆ ಬಂದು ಹೋದ. ಬರೋಬ್ಬರಿ ೧೨ ಗಂಟೆ ತನ್ನ ಮನೆಯಲ್ಲಿಯೇ ಇದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿಯೂ ಸಿಕ್ಕಿತು. ಪೊಲೀಸ್ ಜೀಪುಗಳು ಬಂದವು. ವಾಪಸ್ ಹೋದವು. ಬಿಜಿಕೆ ಮನೆಗೆ ಬಂದ ಪೊಲೀಸರು ಸುತ್ತಲಿನ ಪ್ರದೇಶಗಳನ್ನು ಹುಡುಕದೇ ಹಿಂದಿರುಗ್ದಿದು ಏಕೆ? ಈ ಪ್ರಶ್ನೆಗೆ ಉತ್ತರ ಹೇಳುವವರು ಯಾರು?
ಹಿಡಿಯಬೇಕಾದವರನ್ನು ಹಿಡಿಯಲು ಅಸಮರ್ಥರಾಗಿರುವ ಪೊಲೀಸರು ಅಮಾಯಕ ದಲಿತರ ಮೇಲೆ ತಮ್ಮ ದರ್ಪ ಮೆರೆಯುತ್ತಾರೆ. ಇತ್ತೀಚೆಗಷ್ಟೇ ಹೊಸಕೆರೆ ಕಾಲನಿಗೆ ಮಫ್ತಿ ಪೊಲೀಸ್ ತಂಡವೊಂದು ಬಂದಿತ್ತು. ಬಂದೂಕು ಹಿಡಿದ ಜನರನ್ನು ಕಂಡು ಭಯಗೊಂಡ ಯುವತಿಯೊಬ್ಬಳು ಹಿತ್ತಲಿನಲ್ಲಿ ಅಡಗಿ ಕುಳಿತಳು. ಅವಳನ್ನೇ ನಕ್ಸಲ್ ನಾಯಕಿ ಎಂದು ಕೊಂಡ ಪೊಲೀಸರು ಫೈರಿಂಗ್ ಪೊಸಿಷನ್ ತೆಗೆದುಕೊಂಡು ಅವಳನ್ನು ಹೆದರಿಸಿದರು. ಥಳಿಸಿ ಬಂಧಿಸಿದರು. ಅವಳ ಅಮಾಯಕತೆ ಸಾಬೀತಾದ ನಂತರ ಮನೆಗೆ ಕಳುಹಿಸಿದರು.
ನೋಡಿ ಸ್ವಾಮಿ, ಶೃಂಗೇರಿ ತ್ಲಾಲೂಕಿನ್ಲಲಿ ಪೊಲೀಸರೂ ಮಫ್ತಿಯ್ಲಲಿರುತ್ತಾರೆ. ನಕ್ಸಲರು ಮಫ್ತಿಯ್ಲಲಿರುತ್ತಾರೆ. ಅದಕ್ಕೆ ಜನ ಕೋವಿ ಕಂಡ ತಕ್ಷಣ ಹೆದರುತ್ತಾರೆ. ‘ನಾವು ನಕ್ಸಲರ್‍ಲಲ. ಪೊಲೀಸರು’ ಎನ್ನಲು ಪೊಲೀಸರಿಗೆ ಬಾಯಿ ಇರಲ್ಲಿಲವೇ. ತಮ್ಮಿಂದ ತಪ್ಪಾಗಿದೆ ಎಂದು ಗೊತ್ತಾದ ಮೇಲಾದರೂ ಕ್ಷಮೆಯಾಚಿಸಬೇಡವೇ?
ಹಫ್ತಾ ವಸೂಲಿ:
ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುವ ರೌಡಿಗಳಿಗೂ, ನಮ್ಮೂರಿನಲ್ಲಿ ಬಡವರ ಬೆವರು ಹೀರುವ ನಕ್ಸಲರಿಗೂ ಅಂಥ ವ್ಯತ್ಯಾಸವಿಲ್ಲ. ಅಡಿಕೆ ಕೊಯ್ಲಿನ ಸಮಯದಲ್ಲಿ ಇಂಥ ಮನೆಗೆ ಇಷ್ಟು ಹಣ ಎಂದು ನಕ್ಸಲರು ‘ದೇಣಿಗೆ’ ನಿಗದಿಪಡಿಸ್ದಿದಾರೆ. ಊರಿನಲ್ಲಿರುವ ಸಣ್ಣಸಣ್ಣ ವ್ಯಾಜ್ಯಗಳನ್ನು ಬಳಸಿಕೊಂಡೇ ಬೇರೂರುವ ನಕ್ಸಲರು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅರೆದು ಕುಡಿದ್ದಿದಾರೆ. ಯಾರ ಪರವಾಗಿ ತೀರ್ಪು ನೀಡುತ್ತಾರೋ ಅವರ ಮನೆಯಿಂದ ಸ್ನೇಹದ ಕಾಣಿಕೆ ರೂಪದ್ಲಲಿ ಅಷ್ಟು ಕೀಳುತ್ತಾರೆ, ಯಾರ ವಿರುದ್ಧ ತೀರ್ಪು ನೀಡುತ್ತಾರೋ ಅವರ ಮನೆಯಿಂದ ದಂಡ ಶುಲ್ಕವಾಗಿ ಅಷ್ಟು ಕೀಳುತ್ತಾರೆ. ಇದನ್ನು ನಾವು ಸಾಮಾಜಿಕ ಚಳವಳಿ ಎಂದು ಒಪ್ಪಬೇಕೆ?
ಪೊಲೀಸರಿಗೇ ಹೆದರಿಕೆ:
ನಕ್ಸಲರ ಬಗ್ಗೆ ಮಾಹಿತಿ ಸಂಗ್ರಹಿಸುವ ಅತ್ಯುತ್ತಮ ಜಾಲ ಹೆಣೆದ್ದಿದ ಗುಪ್ತಚರ ಅಧಿಕಾರಿಯನ್ನು ನಮ್ಮ ಪೊಲೀಸರು ಕೊಪ್ಪದಿಂದ ಮಂಗಳೂರಿಗೆ ವರ್ಗಾಯಿಸ್ದಿದಾರೆ. ಅಂಥ ಜಾಲ ಹೆಣೆಯಲು ಆ ಅಧಿಕಾರಿ ಅನೇಕ ವರ್ಷ ಶ್ರಮಪಟ್ಟ್ದಿದರು. ಇದೇ ರೀತಿ ನಕ್ಸಲ್ ಥ್ರೆಟ್ ಇರುವ ಇತರರನ್ನೂ ವರ್ಗಾಯಿಸುವ ಚಿಂತನೆ ನಡೆದಿದೆ. ತಮ್ಮ ಸಿಬ್ಬಂದಿಯನ್ನೇ ರಕ್ಷಿಸಿಕೊಳ್ಳಲು ಅಸಮರ್ಥರಾದ ಪೊಲೀಸರನ್ನು ನಂಬಿಕೊಂಡು ನಾವು ಬದುಕುವುದಾದರೂ ಹೇಗೆ? .
ನಕ್ಸಲರಿಗೆ ಹೆದರಿ ಮತ್ತು ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಶೃಂಗೇರಿ ಮತ್ತು ಕುಂದಾಪುರ ತ್ಲಾಲೂಕಿನ ಅನೇಕ ಕುಟುಂಬಗಳು ಈಗಾಗಲೇ ಊರು ಬಿಟ್ಟಿವೆ. ಇದೇ ಪರಿಸ್ಥಿತಿ ಮುಂದುವರಿದರೆ ನಾವೂ ಊರು ಬಿಡುತ್ತೇವೆ.